ನೀತಿಕಾವ್ಯಗಳು -
	ನೀತಿಬೋಧೆಗಾಗಿಯೇ ರಚಿತವಾದ ಕೃತಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ನೀತಿಕಾವ್ಯಗಳು ಸಂಸ್ಕøತದಲ್ಲಿ ಹೇರಳವಾಗಿವೆ. ಅವುಗಳಲ್ಲಿ ಚಾಣಕ್ಯ ನೀತಿಶತಕವನ್ನು ಮೊದಲು ಹೆಸರಿಸಬಹುದು. ಏಕೆಂದರೆ ಅದು ಕ್ರಿ.ಪೂ. 2ನೆಯ ಶತಮಾನದ್ದಾಗಿರಬೇಕು. ಚಾಣಕ್ಯ ನೀತಿಶಾಸ್ತ್ರ, ಚಾಣಕ್ಯ ನೀತಿದರ್ಪಣ, ವೃದ್ಧ ಚಾಣಕ್ಯ, ಲಘು ಚಾಣಕ್ಯ ಎಂದು ಮುಂತಾಗಿ ಅದನ್ನು ಕರೆಯುವುದುಂಟು. ಅದರಲ್ಲಿ ಪ್ರಾಚೀನ ಮೂಲದಿಂದ ಸಂಗ್ರಹಿಸಿರಬಹುದಾದ, ಅರ್ಥಗೌರವವುಳ್ಳ ವಿವಿಧ ನಾಣ್ನುಡಿ ಜಾಣ್ನುಡಿಗಳಿವೆ. ಬೌದ್ಧ ತತ್ತ್ವಜ್ಞಾನಿ ಆರ್ಯದೇವ ಕ್ರಿ.ಶ. 400ರಲ್ಲಿ ಬರೆದ ಚತುಃಶತಕವೂ ರಾಜನೀತಿ ಪ್ರಧಾನವಾದ ಪ್ರಸಿದ್ಧ ಗ್ರಂಥ. ಆರ್ಯಶೂರನ ಜಾತಕಮಾಲೆ ಎಂಬ ಕಾವ್ಯಶೈಲಿಯ, ಪದ್ಯಗರ್ಭಿತ, ಗದ್ಯಗ್ರಂಥದಲ್ಲಿನ ವಿಷಯವೂ ರಾಜಧರ್ಮವೇ. ಅಭಿಧರ್ಮಕೋಶದಲ್ಲಿ ವಸಬಂಧುವೆಂಬ ಬೌದ್ಧ ಲೇಖಕನೂ ಈ ವಿಷಯವನ್ನೇ ಪ್ರತಿಪಾದಿಸಿದ್ದಾನೆ. ಕಾವ್ಯಗುಣಕ್ಕಿಂತ ಶಾಸ್ತ್ರಗುಣಗಳು ಹೀಗೆ ಹೆಚ್ಚಾಗಿರುವ ಕಾಮಂದಕನೀತಿ ಶುಕ್ರನೀತಿಸಾರಗಳ ರಾಜನೀತಿವಿವೇಷನೆ ಸುಪ್ರಸಿದ್ದ. ಸರ್ಗಗಳಾಗಿ ವಿಭಕ್ತವಾದ ಕಾಮಂದಕ ನೀತಿಸಾರ ಮೊದಲಿನೆರಡು ಸರ್ಗಗಳಲ್ಲಿ ರಾಜ್ಯ ಪದ್ದತಿಯನ್ನೂ ಅನಂತರದ 2 ಸರ್ಗಗಳಲ್ಲಿ 6 ವಿಧದ ವಿದೇಶ ನೀತಿಯನ್ನೂ ಮುಂದಿನೊಂದು ಸರ್ಗದಲ್ಲಿ ರಾಜ ಮಂತ್ರಿಗಳ ಸಲಹೆ ತೆಗೆದುಕೊಳ್ಳುವ ಬಗೆಯನ್ನೂ ಆಮೇಲಿನೆರಡು ಸರ್ಗಗಳಲ್ಲಿ ರಾಯಭಾರಿಯ ಕರ್ತವ್ಯವನ್ನೂ ಒಂದು ಸರ್ಗದಲ್ಲಿ ಪರಂಪರಾಗತವಾದ ರಾಜದುವ್ರ್ಯಸನಮಾಲೆಯನ್ನೂ 12 ಸರ್ಗಗಳಲ್ಲಿ ರಾಜ ತಾಂತ್ರಿಕ ವಿಧಾನಗಳನ್ನೂ ಅಭಿಜಾತ ಕಾವ್ಯಶೈಲಿಯಲ್ಲಿ ಬಿತ್ತರಿಸಿದೆ. ಅದರ ರಾಜನೀತಿತತ್ತ್ವಪ್ರಣಾಳಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಆಧರಿಸಿದೆ. ಅನಂತರದ, ಅಂದರೆ, ಸುಮಾರು ಕ್ರಿ.ಶ. 13ನೇ ಶತಮಾನದ ಶುಕ್ರನೀತಿಸಾರ ಕೆಲವಂಶಗಳಲ್ಲಿ ಕೌಟಿಲ್ಯ ಕಾಮಂದರನ್ನು ಆಧರಿಸಿದರೂ ಮಿಕ್ಕೆಡೆಗಳಲ್ಲಿ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತ ಮಾಡುತ್ತದೆ; ಕೆಲ ವಿಷಯಗಳಲ್ಲೇನೋ ಆದು ಸ್ಮøತಿ ಗ್ರಂಥಗಳಿಗೆ ಋಣಿ. 

	ಕತೆಗಳ ಮೂಲಕ ರಾಜನೀತಿ ವ್ಯಕ್ತಿನೀತಿಗಳನ್ನು ಬೋಧಿಸುವಂಥ ಗ್ರಂಥಗಳಲ್ಲಿ ಪಂಚತಂತ್ರ, ಹಿತೋಪದೇಶಗಳು ಅತ್ಯಂತ ಪ್ರಸಿದ್ಧ. ಅವು ಪದ್ಯಗರ್ಭಿತವಾದ ಗದ್ಯಕಾವ್ಯಗಳು. ಪಂಚತಂತ್ರದ ಮೂಲ ಸಿಕ್ಕಿಲ್ಲ. ಆದರೆ ಕಾಶ್ಮೀರ ಪಾಠ ತಂತ್ರಾಖ್ಯಾಯಿಕೆ ಎಂಬ ಹೆಸರಿನಲ್ಲಿ ದೊರಕಿದೆ. ಅದು ಕ್ರಿ.ಶ.570ಕ್ಕಿಂತ ಹಿಂದಿನದು. ಅದರ ಭಾಗಗಳು 5; ಮಿತ್ರಭೇದ, ಸುಹೃಲ್ಲಾಭ, ಕಾಕೋಲೂಕೀಯ, ಲಬ್ದನಾಶ, ಅಸಂಪ್ರೇಕ್ಷ್ಯಕಾರಿತ್ವ ಎಂದು. ಅದರದು ಸಂಸ್ಕøತ ಅಭಿಜಾತ ಕಾವ್ಯಶೈಲಿ. ಪಂಚತಂತ್ರದ ತಂತ್ರಾಖ್ಯಾಯಿಕೆಯ ಮೂಲ ಪಾಠ ಸುಮಾರು ಕ್ರಿ.ಪೂ. 2ನೆಯ ಶತಮಾನದವರೆಗೂ ಹೋಗಬಹುದೆಂದೂ ಅದರ ಮೂಲ ಕರ್ತ ಕೌಟಿಲ್ಯ ಅಥವಾ ವಿಷ್ಣುಶರ್ಮ ಎಂದು ನಂಬಲಾಗಿದೆ. ರಚನಾವಿಧಾನದಲ್ಲದು ಈಸೋಪನ ಕಥಾವಳಿಯಿಂದ ತೀರ ಭಿನ್ನ. ಹಿತೋಪದೇಶ ಅದರ ಕಥೆಗಳನ್ನಾಯ್ದು ಸಂಗ್ರಹಿಸಿದ ಇನ್ನೊಂದು ರೂಪ. ಮೇಘವಿಜಯನೆಂಬ ಜೈನಮುನಿ ಹೊಸ ಕಥೆಗಳನ್ನು ಸೇರಿಸಿ ಪಂಚತಂತ್ರದ ಮತ್ತೊಂದು ರೂಪವನ್ನು ರಚಿಸಿದ್ದಾನೆ. ಕ್ರಿ.ಶ. 6ನೆಯ ಶತಮಾನದಲ್ಲಿ ಪಂಚತಂತ್ರವನ್ನು ಪಹ್ಲವಿಗೆ (ಅಥವಾ ಹಳೆ ಪಾರಸಿ ಭಾಷೆಗೆ) ಭಾಷಾಂತರಿಸಲಾಯಿತು. ಕ್ರಿ.ಶ. 9ನೇ ಶತಮಾನದಲ್ಲಿ ಅದನ್ನು ಅರಬ್ಬಿಗೂ ಆಮೇಲೆ ಹೀಬ್ರೂ, ಸಿರಿಯಾಕ್, ತುರ್ಕಿ ಮತ್ತು ಗ್ರೀಕಿಗೂ ಅನುವಾದಿಸಲಾಯಿತು. ಈಗ ಯೂರೋಪಿನ ಎಲ್ಲ ಭಾಷೆಗಳಲ್ಲೂ ಪಂಚತಂತ್ರವನ್ನೋದಬಹುದು.

	ವಾಕ್ಯಪದೀಯ ಶತಕತ್ರಯಗಳ ಕರ್ತನಾದ ಭರ್ತೃಹರಿ (ಮರಣ: ಕ್ರಿ.ಶ. 671) ಬರೆದ ನೀತಿಶತಕ ಜನಪ್ರಿಯವೂ ಪ್ರಸಿದ್ಧವೂ ಆಗಿದೆ. ಜನರ ಪ್ರವೃತ್ತಿಗಳನ್ನು 10 ವಿಧವಾಗಿ ವಿಭಾಗಿಸಿ ಮೂರ್ಖ ಪದ್ಧತಿ, ಅರ್ಥ ಪದ್ಧತಿ ಎಂದು ಮುಂತಾಗಿ 10 ಪದ್ಧತಿಗಳಲ್ಲಿ ವಿಭಜಿಸಿ, ಒಂದೊಂದು ಪದ್ಧತಿಗೆ ಹತ್ತು ಹತ್ತು ಶ್ಲೋಕಗಳನ್ನು ಮೀಸಲಾಗಿಸಿ, ಒಟ್ಟು 100 ಶ್ಲೋಕಗಳಲ್ಲಿ ಸುಂದರ ಶೈಲಿಯಿಂದ ಭರ್ತೃಹರಿ ತನ್ನ ನೀತಿ ಕಾವ್ಯವನ್ನು ಬರೆದು ಮುಗಿಸಿದ್ದಾನೆ. ಕ್ರಿ.ಶ. 779-813ರ ನಡುವೆ ಆಳುತ್ತಿದ್ದ ಜಯಾಪೀಡನ ಮಂತ್ರಿಯಾದ ದಾಮೋದರ ಗುಪ್ತ ಕುಟ್ಟನೀಮತ ಅಥವಾ ಶಂಭಲೀ ಮತ ಎಂಬ ಹೆಸರಿನ ಗ್ರಂಥದಲ್ಲಿ ವೇಶ್ಯಾನೀತಿಯನ್ನು ಸೂಕ್ಷ್ಮವಾದ ವಿಡಂಬನ ಧ್ವನಿಯಿಟ್ಟು ಬರೆದಿದ್ದಾನೆ. ಹಾಸ್ಯ ಚತುರೋಕ್ತಿಗಳಿಂದ ಕೂಡಿದ ಈ ಕೃತಿ, ಪ್ರೇಮ ರಹಸ್ಯವನ್ನು ವಿವರಿಸುತ್ತದೆ. ಇದರ ವಸ್ತುವಿನ ಪ್ರಕಟೋದ್ದೇಶ ವೇಶ್ಯೋಪದೇಶವಾದರೂ ಇದರಲ್ಲಿ ಬರುವ ಪಾತ್ರಗಳು ಸಾಕಷ್ಟು ಅಪ್ರಿಯವೆನ್ನಿಸಿದರೂ ತತ್ಕಾಲೀನ ಸಮಾಜದಲ್ಲಿನ ಕೆಲ ಮಾನವ ಮಾದರಿಗಳ ವಾಸ್ತವಿಕ ಚಿತ್ರಣವನ್ನು ಕೊಡುವ ಪ್ರತಿಪಾದನೆ ಚೊಕ್ಕವಾಗಿದೆ. ಉಚ್ಚಮಟ್ಟದ ಕಲೆಗಾರಿಕೆಯುಳ್ಳ ಈ ಗ್ರಂಥ ಗ್ರಂಥಕರ್ತನ ವಿಶಾಲ ಆಳವೂ ಆದ ವ್ಯಾವಹಾರಿಕ ಜ್ಞಾನಾನುಭವಗಳನ್ನು ಬಿಂಬಿಸುತ್ತದೆ.

	ಕ್ರಿ.ಶ. 17ನೆಯ ಶತಮಾನದಲ್ಲಿ ಪಂಡಿತ ರಾಜ ಜಗನ್ನಾಥನ ಭಾಮಿನೀವಿಲಾಸದಲ್ಲಿಯೂ ಪದ್ಮಾನಂದ, ಅಪ್ಪಯ್ಯ ದೀಕ್ಷಿತರುಗಳ ವೈರಾಗ್ಯ ಶತಕಗಳಲ್ಲಿಯೂ ನೀತಿಯ ಉಪದೇಶವಿದೆ. 115 ಆರ್ಯಾವೃತ್ತಗಳಿಂದ ಕೂಡಿದ ನೀತಿದ್ವಿಷಷ್ಟಿಕೆ ಎಂಬುದು ಸುಂದರ ಪಾಂಡ್ಯನ ಕೃತಿ. ಇದರ ವೃತ್ತಗಳಲ್ಲಿ ಕೃತಕತೆ ಹೆಚ್ಚು, ಸಾಹಿತ್ಯ ಗುಣ ಕಡಿಮೆ. ಆದರೆ ಇದಕ್ಕೂ ಹೆಚ್ಚು ಆಕರ್ಷಕವಾದುದು ಭಲ್ಲಟ ಶತಕ. ಭಲ್ಲಟ ಕ್ರಿ.ಶ. 883-902ರ ನಡುವೆ ಆಳುತ್ತಿದ್ದ ಕಾಶ್ಮೀರದ ಶಂಕರವರ್ಮನ ಆಸ್ಥಾನಕವಿ. ಅವನ ಕೃತಿಯಲ್ಲಿ 108 ನುಡಿಗಳಿವೆ. ವಿವಿಧ ವೃತ್ತಗಳುಳ್ಳ ಈ ಶತಕದ ಶೈಲಿ ಬಹಳ ಅಚ್ಚುಗಟ್ಟಾಗಿದೆ. ಕ್ರಿ.ಶ. 1206ಕ್ಕೆ ಹಿಂದಿದ್ದ ಶಿಲ್ಹಣನ ಶಾಂತಿಶತಕ 4 ಅಧ್ಯಾಯಗಳ ಗ್ರಂಥ; ಭರ್ತೃಹರಿಯ ವೈರಾಗ್ಯಶತಕದಿಂದ ಸ್ಫೂರ್ತಿ ಪಡೆದು ಬರೆದಂತಿದೆ. ನೀತಿಶತಕದಂತೆ ಭರ್ತೃಹರಿಯ ವೈರಾಗ್ಯ ಶತಕವೂ 10 ಶ್ಲೋಕಗಳ ಗುಂಪಿನ 10 ತಲೆಬರಹಗಳಲ್ಲಿ ತೃಷ್ಣಾದೂಷಣ, ವಿಭಕ್ತವಾಗಿ, ವಿಷಯ ಪರಿತ್ಯಾಗ ವಿಡಂಬನೆ, ಯಾಚ್ನಾದೈನ್ಯದೂಷಣ, ಭೋಗಾಸ್ಥೈರ್ಯ ವರ್ಣನ ಮುಂತಾದ ನೈತಿಕಾಂಶಗಳಿಂದ ಮನೋಹರವಾಗಿದೆ. ಶಾಂತಿಶತಕವೂ ಹಾಗೇ ನೈತಿಕಾಂಶಗಳನ್ನೊಳಗೊಂಡಿದೆ. 108 ನುಡಿಗಳುಳ್ಳ ಶಂಭುವಿನ ಅನ್ಯೋಕ್ತಿಮುಕ್ತಾಲತೆಯೂ ಕುಸುಮದೇವನ ದೃಷ್ಟಾಂತಕಲಶಾ ಶತಕವೂ ಗುಮಾನಿಯ ಉಪದೇಶ ಶತಕವೂ ನಾಗರಾಜನ ಭಾವಶತಕವೂ ನೀತಿಕಾವ್ಯಗಳ ಕಕ್ಷೆಯಲ್ಲಿ ಬರುತ್ತದೆ. ಆರ್ಯವೃತ್ತದಲ್ಲಿರುವ ಉಪದೇಶಶತಕ ಪೌರಾಣಿಕವೆನ್ನಿಸುವ ಕತೆಗಳ ಮೂಲಕ ನೀತಿಬೋಧ ಮಾಡಿದರೆ, ಭಾವಶತಕ ವಿವಿಧ ವೃತ್ತವಿಲಾಸದ ಮೂಲಕ ಪ್ರೇಮಮಗ್ನರನೇಕರ ನಡತೆಯ ಹಿನ್ನೆಲೆಯನ್ನರಹುತ್ತದೆ. ರುದ್ರನ್ಯಾಯವಾಚಸ್ಪತಿಯ ಭಾವವಿಲಾಸವೆಂಬ ಕಾವ್ಯ ಸೊಗಸಾದ ಅನ್ಯಾಪದೇಶ ಶ್ಲೋಕಗಳಿಂದ ಕೂಡಿದೆ. ದಕ್ಷಿಣಾಮೂರ್ತಿ ಮತ್ತು ನೀಲಕಂಠದೀಕ್ಷಿತರ ಲೋಕೋಕ್ತಿ ಮುಕ್ತಾವಲಿ ಮತ್ತು ಅನ್ಯಾಪದೇಶಶತಕಗಳೂ ನೀತಿಪರವಾಗಿವೆ. 105 ನುಡಿಗಳುಳ್ಳ ಸಭಾರಂಜನ ಗ್ರಂಥವನ್ನೂ ನೀಲಕಂಠ ದೀಕ್ಷಿತ ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದ್ದಾನೆ. ಶಾಂತಿವಿಲಾಸ, ವೈರಾಗ್ಯಶತಕ, ಕಲಿವಿಡಂಬನಗಳು ಆತ ಬರೆದ ಇತರ ನೀತಿಪ್ರಧಾನ ಕಾವ್ಯಗಳು. ಇಂಥ ಉಪಕಾವ್ಯಗಳಲ್ಲಿ ಕಾವ್ಯಗುಣಕ್ಕಿಂತ ಪ್ರಯತ್ನಜನ್ಯವಾದ ಚತುರೋಕ್ತಿಗಳೇ ಹೆಚ್ಚು ಆಕರ್ಷಕ.

	ಹೆಚ್ಚಾಗಿ ಶತಕಾದಿ ನೀತಿಪದ್ಯಮಾಲೆಗಳು ಮುಕ್ತಕಗಳು ಸಂಗ್ರಹಗಳು. ಅವುಗಳಲ್ಲಿಯ ಪ್ರತಿಯೊಂದು ಮುಕ್ತಕ ಶ್ಲೋಕವೂ ಅರ್ಥದಲ್ಲಿ ಸ್ವಯಂಪೂರ್ಣವಾಗಿರುವ ನಾಲ್ಕು ಪದಗಳುಳ್ಳ ಒಂದು ನುಡಿ. ಅರ್ಥ ರಸದೃಷ್ಟಿಗಳಿಂದ ತಾನೇ ತಾನಾಗಿ, ಹಿಂದು ಮುಂದಿನ ಶ್ಲೋಕವನ್ನು ಅವಲಂಬಿಸುವ ಅಗತ್ಯವನ್ನು ತಂದುಕೊಳ್ಳದೇ ಧಾರಾವಾಹಿಯಾಗಿ ಹರಿಯುವ ಕಾವ್ಯಗುಣವುಳ್ಳ ನುಡಿಯ ರೂಪದ ಮುಕ್ತಕವೊಂದು ಸುಭಾಷಿತ, ನಲ್ನುಡಿ, ಸುಭಾಷಿತ ಪ್ರಪಂಚ ಸಂಸ್ಕøತ ಸಾಹಿತ್ಯದ ಬಹುಜನಪ್ರಿಯವಾದ ಮತ್ತು ಉಪಯುಕ್ತವಾದ ಪ್ರದರ್ಶನಾಂಗಣ. ಸುಭಾಷಿತ ಗ್ರಂಥಗಳಲ್ಲಿ ಒಂದೊಂದು ಮುಕ್ತಕವೂ ಒಂದೊಂದು ಸುಭಾಷಿತ. ವೆಂಕಟದೇಶಿಕನ ಸುಭಾಷಿತ ನೀವಿ 144 ಸುಭಾಷಿತಗಳನ್ನು ಗರ್ಭೀಕರಿಸಿಕೊಂಡಿದೆ. ಅದರ ಪದ್ಧತಿ ಅಥವಾ ವಿಭಾಗಗಳು 12. ಹರಿಹರ ರಚಿಸಿದ ಹರಿಹರ ಸುಭಾಷಿತ ಬಹಳ ವೈವಿಧ್ಯವುಳ್ಳದ್ದಾಗಿದೆ. ಅಮಿತಗತಿ ನಿರ್ಮಿಸಿದ ಸುಭಾಷಿತರತ್ನಸಾದೋಹವೂ ಹಾಗೇ. ಉಕ್ತ ಹರಿಹರ ಕೃತಿಯ 600 ನುಡಿಗಳಲ್ಲಿ ರಾಜನೀತಿ-ಪ್ರೇಮನೀತಿ-ಅಧ್ಯಾತ್ಮನೀತಿಗಳ ವರ್ಣನೆಯಿದೆ. 32 ಪ್ರಕಟಣಗಳುಳ್ಳ ಅಮಿತಗತಿಯ ಕೃತಿಯಲ್ಲಿ ಜೈನ ಸಮುದಾಚಾರ, ಸ್ತ್ರೀವಿಮರ್ಶೆ, ಮದ್ಯ, ದ್ಯೂತ, ವೇಶ್ಯಾವಿಚಾರಗಳು ಅನಾವೃತವಾಗಿವೆ.

	ಕ್ರಿ.ಶ. 11ನೆಯ ಶತಮಾನದಲ್ಲಿದ್ದ ಕ್ಷೇಮೇಂದ್ರ ನೀತಿಕಲ್ಪತರು, ಕಾಮಸೂತ್ರಸಾರ, ಸಮಯಮಾತೃಕೆ, ಸೇವ್ಯಸೇವಕೋಪದೇಶ, ಚಾರುಚರ್ಯೆ, ಚತುರ್ವರ್ಣ ಸಂಗ್ರಹ, ದರ್ಪಜಲನ, ಕಲಾವಿಲಾಸ, ದೇಶೋಪದೇಶ ನರ್ಮದೂತ ಮುಂತಾದ ವಿವಿಧ ನೀತಿಗಳ ವಿವರಣೆಯುಳ್ಳ ಗ್ರಂಥಗಳನ್ನು ರಚಿಸಿದ್ದಾನೆ. ಅವನಂತೆಯೇ ಕಾಶ್ಮೀರ ನಿವಾಸಿಯಾದ ಜಲ್ಹಣನೂ ಮುಗ್ಧೋಪದೇಶವೆಂಬ ನೀತಿಗ್ರಂಥವನ್ನು ರಚನೆ ಮಾಡಿದ್ದಾನೆ.

	ವಿವಿಧ ಆಕರಗಳಿಂದ ಶ್ಲೋಕಗಳನ್ನಾಯ್ದು ಕೋದ ಸುಭಾಷಿತಮಾಲೆ ಅಥವಾ ಕೋಶಗಳು ಅನೇಕ. ಕವೀಚಿದ್ರ ವಚನಸಮುಚ್ಚಯ ಈ ಜಾತಿಗೆ ಸೇರಿದ ಕ್ರಿ.ಶ. 12ನೆಯ ಶತಮಾನದ ಗ್ರಂಥ. 113 ಕವೀಂದ್ರರ ಸೂಕ್ತಿಮುಕ್ತಾಫಲಗಳದರಲ್ಲಿವೆ. ಕಾಶ್ಮೀರತವಲ್ಲಭದೇವನೆಂಬ ಮಾಲೆಗಾರನ ಸುಭಾಷಿತಾವಳಿಯಲ್ಲಿ 360 ಕವಿವರರ 3,527 ನುಡಿಗಳನ್ನು 101 ಪದ್ಧತಿಗಳಲ್ಲಿ ವರ್ಗೀಕರಿಸಲಾಗಿದೆ. ಈ ಮಾಲೆ ಕ್ರಿ.ಶ. 15ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು. ಶ್ರೀಧರದಾಸ ಸಂಚಯನ ಮಾಡಿದ ಸದುಕ್ತಿಕರ್ಣಾಮೃತ ಎಂಬ ಸುಭಾಷಿತಕೋಶ ಕ್ರಿ.ಶ. 1206ರದ್ದು. ಇದರ ಶ್ಲೋಕಸಂಖ್ಯೆ 2,380. ಈ ಸುಭಾಷಿತಗಳನ್ನು 485 ಗ್ರಂಥ ಮತ್ತು ಕವಿಗಳಿಂದ ಸಂಗ್ರಹಿಸಲಾಯಿತು. ಜಲ್ಹಣ ಕ್ರಿ.ಶ. 1252ರಲ್ಲಿ ಸುಭಾಷಿತಾವಳಿಯ ಮಾದರಿಯಲ್ಲಿ ಸುಭಾಷಿತಮುಕ್ತಾಳಿ ಇಲ್ಲವೆ ಸೂಕ್ತಿಮುಕ್ತಾವಳಿ ಎಂಬ ಸುಭಾಷಿತ ಕೋಶವನ್ನು ಸಿದ್ಧಗೊಳಿಸಿದ. ಇದರಲ್ಲಿ 2,40ಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳಿಂದ, ಗ್ರಂಥಕರ್ತೃಗಳಿಂದ ಆಯ್ದುಕೊಂಡ 2,790 ಸುಭಾಷಿತಗಳಿವೆ. ಶಾಙ್ರ್ಗಧರ ಕ್ರಿ.ಶ. 1363ರಲ್ಲಿ ಶಾಙ್ರ್ಗಧರಪದ್ಧತಿ ಎಂಬ ಮತ್ತೊಂದು ಸುಭಾಷಿತ ಮಾಲೆಯನ್ನು ಹೆಣೆದ. ಸೂರ್ಯ ಕಲಿಂಗರಾಯನ ಸೂಕ್ತಿರತ್ನಹಾರ, ಶ್ರೀವರನ ಸುಭಾಷಿತಾವಳಿ, ವೇಣಿದತ್ತನ ಪದ್ಯವೇಣಿ, ಲಕ್ಷಣಭಟ್ಟನ ಪದ್ಯರಚನೆ, ಹರಿಭಾಸ್ಕರನ ಪದ್ಯಾಮೃತ ತರಂಗಿಣಿ, ಹರಿಕವಿಯ ಸುಭಾಷಿತಹಾರಾವಳಿ-ಮುಂತಾದವು ಇತರ ನೀತಿಪ್ರಧಾನವಾದ ಸುಭಾಷಿತ ಗ್ರಂಥಗಳು.							(ಬಿ.ಎಚ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ